ಡಿ.ಎಸ್. ಅರುಣ್ ಗಂಭೀರ ಆರೋಪ ಬೆಂಗಳೂರು/ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಮರಳು ಮಾಫಿಯಾ ಅಟ್ಟಹಾಸ ತಾರಕ್ಕೇರಿದ್ದು, ಕೃತಕ ಅಭಾವ ಸೃಷ್ಟಿಸಿ ಜನರನ್ನು ದೋಚುವ ಸಂಘಟಿತ ಅಕ್ರಮ ಜಾಲ ಬಯಲಾಗುತ್ತಿದೆ. ಸರ್ಕಾರದ ಯಂತ್ರಾಂಗವೇ ಮೌನ ವಹಿಸಿರುವ ಹಿನ್ನೆಲೆ, ಸಾಮಾನ್ಯ ಜನರು ಕಟ್ಟಡ ನಿರ್ಮಾಣಕ್ಕೂ ಮರಳು ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್. ಅರುಣ್ ಈ ಗಂಭೀರ ವಿಷಯವನ್ನು ಅಧಿವೇಶನದ ಕಾರ್ಯಪಟ್ಟಿಗೆ ತಂದಿದ್ದರೂ, ಸಭೆಯಲ್ಲಿ ಚರ್ಚೆಗೆ ಅವಕಾಶ ಸಿಗದಿರುವುದು ಆತಂಕಕಾರಿಯಾಗಿದೆ. ಆದರೆ ವಿಷಯ ಕಾರ್ಯಪಟ್ಟಿಯಲ್ಲಿ ದಾಖಲಾಗಿರುವುದರಿಂದ ಸರ್ಕಾರದ ನಿಲುವು ಈಗ ಸ್ಪಷ್ಟವಾಗಬೇಕಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
01/07/2025ರಂದು 20 ಮರಳು ಬ್ಲಾಕ್‌ಗಳ ಹರಾಜು ಪೂರ್ಣಗೊಂಡಿದ್ದರೂ, ಇಂದಿಗೂ ಗಣಿಗಾರಿಕೆ ಆರಂಭವಾಗದಿರುವುದು ಸಂಶಯಕ್ಕೆ ಕಾರಣವಾಗಿದೆ. ಗುತ್ತಿಗೆದಾರರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ ನಂತರವೂ, ಎನ್.ಒ.ಸಿ (NOC) ಮಂಜೂರಿನಲ್ಲಿ ಉದ್ದೇಶಪೂರ್ವಕ ವಿಳಂಬ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಆಡಳಿತ ವೈಫಲ್ಯವನ್ನು ದುರುಪಯೋಗಪಡಿಸಿಕೊಂಡ ಮರಳು ಮಾಫಿಯಾ, ಅಕ್ರಮ ಗಣಿಗಾರಿಕೆ ನಡೆಸಿ ದುಪ್ಪಟ್ಟು ದರದಲ್ಲಿ ಮರಳು ಮಾರಾಟ ಮಾಡುತ್ತಿದ್ದು, ಜನರನ್ನೇ ನೇರವಾಗಿ ದೋಚುತ್ತಿದೆ. ಮನೆ ನಿರ್ಮಾಣ, ಸಾರ್ವಜನಿಕ ಕಾಮಗಾರಿಗಳು ಸ್ಥಗಿತಗೊಂಡು, ಜಿಲ್ಲೆಯಾದ್ಯಂತ ಆರ್ಥಿಕ ಚಟುವಟಿಕೆ ಕುಂಠಿತಗೊಂಡಿದೆ.
ಸಮಯಕ್ಕೆ ಮರಳುಗಾರಿಕೆ ಪ್ರಾರಂಭವಾಗಿದ್ದರೆ ಸರ್ಕಾರಕ್ಕೆ ಕನಿಷ್ಠ 40 ಕೋಟಿ ರೂಪಾಯಿ ಆದಾಯ ಬರುತ್ತಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಂಶಯಾಸ್ಪದ ವಿಳಂಬದಿಂದ ಸರ್ಕಾರದ ಬೊಕ್ಕಸಕ್ಕೂ ಭಾರೀ ನಷ್ಟ ಉಂಟಾಗಿದೆ.
ಡಿ.ಎಸ್. ಅರುಣ್ ಎಚ್ಚರಿಕೆ ಮತ್ತು ಆಗ್ರಹ: ಬಾಕಿ ಇರುವ ಎನ್.ಒ.ಸಿ ಗಳನ್ನು ತಕ್ಷಣ ಬಿಡುಗಡೆ ಮಾಡಬೇಕುಹ ರಾಜಾದ ಮರಳು ಬ್ಲಾಕ್‌ಗಳಲ್ಲಿ ತಕ್ಷಣ ಗಣಿಗಾರಿಕೆ ಆರಂಭಿಸಬೇಕು
ವಿಳಂಬದ ಹಿಂದೆ ಇರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು. ಮರಳು ಮಾಫಿಯಾ ಅಕ್ರಮ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಗ್ರಹಿಸಬೇಕು ಜನರಿಗೆ ನಿಯಂತ್ರಿತ ದರದಲ್ಲಿ ಮರಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು
“ಇದು ಕೇವಲ ಆಡಳಿತ ವೈಫಲ್ಯವಲ್ಲ, ಜನರ ಮೇಲೆ ನಡೆಯುತ್ತಿರುವ ಸಂಘಟಿತ ದೋಚಾಟ” ಎಂದು ಡಿ.ಎಸ್. ಅರುಣ್ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.






