ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಚನ್ನಹಳ್ಳಿ ಗ್ರಾಮದ ಸರ್ವೇ ನಂ. 9ರಲ್ಲಿ ದುಃಖದ ಘಟನೆೊಂದು ನಡೆದಿದೆ.
ಬಡ ರೈತ ಸೈನಾನಾಯ್ಕ ಅವರು ತೀವ್ರ ನೀರಿನ ಕೊರತೆಯ ನಡುವೆಯೂ ಕೊಡಪಾನಗಳ ಮೂಲಕ ನೀರು ಹಾಕಿ ಕಷ್ಟಪಟ್ಟು ಬೆಳೆಸಿದ ಅಡಿಕೆ ತೋಟವನ್ನು ದುಷ್ಕರ್ಮಿಗಳು ನಿನ್ನೆ ರಾತ್ರಿ ನಾಶಪಡಿಸಿದ್ದಾರೆ.
ಪಸಲಿಗೆ ಬಂದಿದ್ದ ಅಡಿಕೆ ಮರಗಳನ್ನು ಕಡಿದು ಹಾಕಿರುವ ಘಟನೆ ರೈತನಿಗೆ ಭಾರೀ ಆರ್ಥಿಕ ನಷ್ಟ ಉಂಟುಮಾಡಿದೆ.
ಸೈನಾನಾಯ್ಕ ಅವರು ತಮ್ಮ ಕುಟುಂಬದ ಆಧಾರವಾಗಿದ್ದ ಈ ತೋಟವನ್ನು ವರ್ಷಗಳ ಪರಿಶ್ರಮದಿಂದ ಬೆಳೆಸಿದ್ದರು. ನೀರಿನ ಅಭಾವದಲ್ಲಿಯೂ ದಿನನಿತ್ಯ ಶ್ರಮಿಸಿ ಬೆಳೆ ಬೆಳೆಸಿದ ಇವರಿಗೆ ಈ ಘಟನೆ ಆಘಾತ ತಂದಿದೆ. ಕೇವಲ ಬೆಳೆ ಮಾತ್ರವಲ್ಲ, ಅವರ ಭವಿಷ್ಯದ ಆದಾಯವೂ ಇದರಿಂದ ಹಾನಿಯಾಗಿದೆ.
ಘಟನೆಯ ಬಗ್ಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಮಾಹಿತಿಯನ್ನು ಸಂಗ್ರಹಿಸಿ, ದುಷ್ಕರ್ಮಿಗಳನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿರುವುದಾಗಿ ತಿಳಿದುಬಂದಿದೆ. ಆದರೆ ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಹಿಂದೆಯೂ ನಡೆದಿರುವುದರಿಂದ, ಈ ಪ್ರಕರಣವೂ ನೂರಾರು ಅಪರಿಚಿತ ಕೇಸುಗಳಂತೆಯೇ ಉಳಿಯುವುದೇ ಎಂಬ ಅನುಮಾನ ಗ್ರಾಮಸ್ಥರಲ್ಲಿ ವ್ಯಕ್ತವಾಗಿದೆ.
ರೈತರ ಮೇಲಿನ ಇಂತಹ ಕೃತ್ಯಗಳು ಕೇವಲ ಆಸ್ತಿ ನಷ್ಟವಷ್ಟೇ ಅಲ್ಲ, ಅವರ ಜೀವನಾಧಾರವನ್ನೇ ಕುಂದಿಸುತ್ತವೆ. ಆದ್ದರಿಂದ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ರೈತರ ಸುರಕ್ಷತೆ ಮತ್ತು ಅವರ ಪರಿಶ್ರಮದ ರಕ್ಷಣೆಗಾಗಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ.
ಈ ಘಟನೆ ರೈತರ ಬದುಕಿನ ಅಸುರಕ್ಷತೆಯನ್ನು ಮತ್ತೆ ಎತ್ತಿಹಿಡಿದಿದ್ದು, ನ್ಯಾಯ ಸಿಗುವವರೆಗೆ ಕಾದು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.





