ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವ – 5 ದಿನಗಳ ಭವ್ಯ ಉತ್ಸವ
ಶಿವಮೊಗ್ಗ: ಶಿವಮೊಗ್ಗ ನಗರದ ಇತಿಹಾಸ ಪ್ರಸಿದ್ಧ ಕೋಟೆ ಪ್ರದೇಶದಲ್ಲಿರುವ ಆದಿಶಕ್ತಿ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವವು ಫೆಬ್ರವರಿ 24 ರಿಂದ 28, 2026 ರವರೆಗೆ ಭಕ್ತಿಭಾವ, ಸೌಹಾರ್ದತೆ ಮತ್ತು ಭಾವೈಕ್ಯತೆಯೊಂದಿಗೆ ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.
ಈ ಜಾತ್ರೆಯನ್ನು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯ ಸಾರಥ್ಯದಲ್ಲಿ ಅಧ್ಯಕ್ಷರಾದ ಎಸ್.ಕೆ. ಮರಿಯಪ್ಪ, ಕೋಶಾಧ್ಯಕ್ಷ ಹೆಚ್.ವಿ. ತಿಮ್ಮಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದೆ.
ಜಾತ್ರೆಯ ಪ್ರಮುಖ ಕಾರ್ಯಕ್ರಮಗಳ ವಿವರ:
24-02-2026 (ಮಂಗಳವಾರ)
ಬೆಳಿಗ್ಗೆ 5.30 ರಿಂದ ಮಾರಿ ಗದ್ದುಗೆಯಲ್ಲಿ ಎಡೆಪೂಜೆ ಆರಂಭ
ಬೆಳಿಗ್ಗೆ 7.00 ರಿಂದ ಗಾಂಧಿಬಜಾರ್ ತವರುಮನೆನಲ್ಲಿ ಶ್ರೀ ಅಮ್ಮನವರಿಗೆ ಮಡಲಕ್ಕಿ ಅರ್ಪಣೆ ಹಾಗೂ ಪೂಜೆ
ರಾತ್ರಿ 9.00ಕ್ಕೆ ತವರುಮನೆಯಿಂದ ಉತ್ಸವದೊಂದಿಗೆ ಗದ್ದಿಗೆ ಪ್ರವೇಶ
ಬಿ.ಬಿ. ರಸ್ತೆ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರನ್ನು ಪೂಜೆಗೆ ಆಹ್ವಾನಿಸಲಾಗುತ್ತಿದ್ದು, ಮುತ್ತೈದೆಯರು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.
ವಿಶ್ವಕರ್ಮ ಸಮಾಜದವರು ವಿಸರ್ಜನಾ ಮೂರ್ತಿಗೆ ಮಾಂಗಲ್ಯಧಾರಣೆ ಮಾಡಿ ಸಾರ್ವಜನಿಕ ಪೂಜೆಯನ್ನು ಆರಂಭಿಸಲಿದ್ದಾರೆ.
ರಾತ್ರಿ ವರೆಗೆ ಲಕ್ಷಾಂತರ ಮುತ್ತೈದೆಯರಿಂದ ಮಡಲಕ್ಕಿ ಅರ್ಪಣೆ ನಡೆಯಲಿದೆ.
ಉಪ್ಪಾರ ಸಮಾಜದವರಿಂದ ರಥಾರೋಹಣ ಮೆರವಣಿಗೆಯೊಂದಿಗೆ ಗದ್ದಿಗೆ ಪ್ರವೇಶ ನಡೆಯಲಿದೆ.
ಗಂಗಾಪರಮೇಶ್ವರಿ ದೇವಸ್ಥಾನದಿಂದ ಗಂಗಾಮತಸ್ಥ ಸಮಾಜದವರು ಗಂಗೆ ಪೂಜೆಯೊಂದಿಗೆ ಶ್ರೀ ದೇವಿಗೆ ಪೂಜೆ ಸಲ್ಲಿಸಲಿದ್ದಾರೆ.
25-02-2026 (ಬುಧವಾರ)
ಬೆಳಗಿನ ಜಾವ ಹರಿಜನ ಸಮಾಜದವರು ಬೇವಿನುಡುಗೆಯೊಂದಿಗೆ ಆಗಮಿಸಿ ಪೂಜೆ ಸಲ್ಲಿಸಿ ದೇವಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಿದ್ದಾರೆ.
ಕುರುಬ ಸಮಾಜದವರು ನೈವೇದ್ಯ ಸಮರ್ಪಣೆ ಮಾಡುವರು.
ಪೂಜೆ ಸರದಿ ವ್ಯವಸ್ಥೆ:
ಬೆಳಿಗ್ಗೆ 6.00 – 10.00 : ವಾಲ್ಮೀಕಿ ಸಮಾಜ
10.00 – ಸಂಜೆ 4.00 : ಉಪ್ಪಾರ ಸಮಾಜ
ಸಂಜೆ 4.00 – ರಾತ್ರಿ 10.30 : ಮಡಿವಾಳ ಸಮಾಜ
ಈ ಸರದಿ ಪೂಜೆ ವ್ಯವಸ್ಥೆ ನಾಲ್ಕು ದಿನಗಳ ಕಾಲ ನಡೆಯಲಿದೆ.
28-02-2026 (ಶನಿವಾರ)
ಸಂಜೆ 6.30ಕ್ಕೆ ಮಹಾಮಂಗಳಾರತಿ
ರಾತ್ರಿ 7.00ಕ್ಕೆ ರಾಜಬೀದಿ ಉತ್ಸವದೊಂದಿಗೆ ವನ ಪ್ರವೇಶ
ವಿವಿಧ ಜಾನಪದ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದ್ದು, ಲಕ್ಷಾಂತರ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಮಡಿವಾಳ ಸಮಾಜದವರು ಮಧ್ಯರಾತ್ರಿ ವನ ಪ್ರವೇಶ ವಿಧಿವಿಧಾನಗಳನ್ನು ನೆರವೇರಿಸಿ ಸಂಪ್ರದಾಯದಂತೆ ಶಾಸ್ತ್ರ ನೆರವೇರಿಸಲಿದ್ದಾರೆ.
ಇತಿಹಾಸ ಪ್ರಸಿದ್ಧ ದೇವಾಲಯ
ತುಂಗಾ ನದಿ ತಟದಲ್ಲಿರುವ ಕೆಳದಿ ಅರಸರ ಕೋಟೆ, ಅರಮನೆ, ಶ್ರೀ ಭೀಮೇಶ್ವರ, ಸೀತಾರಾಮಾಂಜನೇಯ ಹಾಗೂ ಆದಿಶಕ್ತಿ ಶ್ರೀ ಮಾರಿಕಾಂಬ ಗದ್ದುಗೆಗಳು ಶಿವಮೊಗ್ಗ ನಗರದ ಮಲೆನಾಡಿನ ಹೆಬ್ಬಾಗಿಲೆಂದೇ ಪ್ರಸಿದ್ಧಿ ಪಡೆದಿವೆ.
ಕೋಟೆ ಶ್ರೀ ಮಾರಿಕಾಂಬ ದೇವಾಲಯವು ಕೆಳದಿ ಶಿವಪ್ಪನಾಯಕ ಅರಸರ ಕಾಲದಿಂದಲೂ ಪ್ರಸಿದ್ಧಿ ಪಡೆದ ಶಕ್ತಿ ಕ್ಷೇತ್ರವಾಗಿದ್ದು, “ಬಯಲು ಮಾರಿ”, “ಬಿಸಿಲು ಮಾರಿ”, “ಕೆಂಚ ಮಾರಿ” ಎಂಬ ಹೆಸರಿನಿಂದ ಭಕ್ತರಲ್ಲಿ ಭಕ್ತಿ ಗೌರವ ಪಡೆದಿದೆ.
ಪ್ರತಿ ಎರಡು ವರ್ಷಕ್ಕೊಮ್ಮೆ ಜಾತ್ರೆ ಭಾವೈಕ್ಯತೆಯೊಂದಿಗೆ ನಡೆಯುವ ಈ ಪರಂಪರೆ ರಾಜ್ಯದಲ್ಲೇ ಅಪರೂಪದ ಸಂಸ್ಕೃತಿ ಉತ್ಸವವಾಗಿ ಗುರುತಿಸಿಕೊಂಡಿದೆ.
ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ
ಮಾರ್ಚ್ 6 ರಿಂದ 8ರವರೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಉದಯೋನ್ಮುಖ ಪೈಲ್ವಾನರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ
ರಾಜ್ಯ ಮತ್ತು ಅಂತರ ರಾಜ್ಯದ ಹೆಸರಾಂತ ಪೈಲ್ವಾನರೊಂದಿಗೆ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ.








