ಶಿವಮೊಗ್ಗ: ಪರಿಣಾಮಕಾರಿ ಸಾರ್ವಜನಿಕ ಭಾಷಣ ಕಾರ್ಯಾಗಾರ ಯಶಸ್ವಿ.
ಜೆಸಿಐ ಶಿವಮೊಗ್ಗ ಚಿರಂತನ, ಪ್ರದೇಶ–ಇ, ಪ್ರದೇಶ–ಡಿ, ವಲಯ–24 ಹಾಗೂ ಅಖಿಲ ಭಾರತ ವೀರಶೈವ ಮಹಾಸಭದ ತಾಲ್ಲೂಕು ಯುವ ಘಟಕದ ಸಂಯೋಜನೆಯಲ್ಲಿ ದಿನಾಂಕ 01-02-2026 ಭಾನುವಾರ ನಗರದ ಶ್ರಿ ವೀರಶೈವ ಕಲ್ಯಾಣ ಮಂಟಪದಲ್ಲಿ “ಪರಿಣಾಮಕಾರಿ ಸಾರ್ವಜನಿಕ ಭಾಷಣ” ವಿಷಯದ ಕುರಿತ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭದ ತಾಲ್ಲೂಕು ಘಟಕದ ಯುವ ಅಧ್ಯಕ್ಷರಾದ ನವೀನ್ ವಾರದ್ ಅವರು, ಅತಿಥಿಗಳ ಪರಿಚಯ ಮಾಡಿಕೊಡುತ್ತಾ ಸಂತೋಷ ಬಳ್ಳಕೆರೆ ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಹಿನ್ನೆಲೆಯನ್ನು ವಿವರಿಸಿದರು.
ಕಾರ್ಯಾಗಾರದಲ್ಲಿ ಮುಖ್ಯವಾಗಿ ಮಾತನಾಡಿದ ಹೆಚ್.ಸಿ. ಯೋಗಿಶ್ ಅವರು, ಸಾರ್ವಜನಿಕ ಭಾಷಣದಲ್ಲಿ ಸಂಯಮದ ಮಹತ್ವವನ್ನು ಒತ್ತಿ ಹೇಳಿದರು. “ಇಂದಿನ ದಿನಗಳಲ್ಲಿ ವೇದಿಕೆಯ ಮೇಲೆ ಮಾತನಾಡುವವರಿಗೂ, ಕೇಳುವವರಿಗೂ ಸಂಯಮ ಕಳೆದುಹೋಗುತ್ತಿದೆ. ಭಾಷಣದ ಅವಧಿ, ವಿಷಯದ ಸ್ಪಷ್ಟತೆ ಮತ್ತು ಪ್ರೇಕ್ಷಕರ ಗಮನ ಸೆಳೆಯುವ ಶೈಲಿ ಅತ್ಯಂತ ಮುಖ್ಯ” ಎಂದು ತಿಳಿಸಿದರು. ಜೋರಾಗಿ, ಸ್ಪಷ್ಟವಾಗಿ ಮಾತನಾಡುವ ಮೂಲಕ ಪ್ರೇಕ್ಷಕರ ಗಮನ ಸೆಳೆಯಬಹುದು. ಆದರೆ ಅತಿಯಾಗಿ ಮಾತನಾಡುವುದು ಬೋರ್ ಉಂಟುಮಾಡುತ್ತದೆ ಎಂದು ಎಚ್ಚರಿಸಿದರು.
ಮೊಬೈಲ್ ರೀಲ್ಸ್‌ಗಳಿಂದ ಮನಸ್ಸಿನ ಚಂಚಲತೆ ಹೆಚ್ಚುತ್ತಿರುವ ಕುರಿತು ಮಾತನಾಡಿದ ಅವರು, ಭಾಷಣಕಾರರು ಆತ್ಮವಿಶ್ವಾಸ ಬೆಳೆಸಿಕೊಳ್ಳಲು ನಿರಂತರ ಅಭ್ಯಾಸ ಅಗತ್ಯವೆಂದು ಹೇಳಿದರು. ವಿಷಯದ ಆಳವಾದ ತಿಳುವಳಿಕೆ ಇದ್ದರೆ ಯಾವುದೇ ವೇದಿಕೆಯಲ್ಲಿ ಧೈರ್ಯದಿಂದ ಮಾತನಾಡಲು ಸಾಧ್ಯ ಎಂದು ಸಲಹೆ ನೀಡಿದರು.
ಸಂತೋಷ ಬಳ್ಳಕೆರೆ ಮಾತನಾಡಿ, ಇಂತಹ ಕಾರ್ಯಾಗಾರಗಳು ಸಾಮಾಜಿಕ, ಶೈಕ್ಷಣಿಕ ಹಾಗೂ ಸಂದರ್ಶನ ಸಂದರ್ಭಗಳಲ್ಲಿ ಉಪಯುಕ್ತವಾಗುತ್ತವೆ ಎಂದು ಹೇಳಿದರು. ಮಹಿಳೆಯರ ಹೆಚ್ಚುತ್ತಿರುವ ಭಾಗವಹಿಸುವಿಕೆ ಸಂತಸದ ಬೆಳವಣಿಗೆಯೆಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಟ್ರೈನರ್ ಜೆಎಪ್ಸಿಎ ಗೌರೀಶ ಬಾಗಾರ್ವ್, ಜೆಎಪಿಎಂ ಪ್ರಸಾದ್ ಶಾಸ್ತ್ರೀ, ಐಪಿಪಿ ಅಧ್ಯಕ್ಷ ಕೆ. ರುದ್ರೇಶ್ ಸಿ. ಕೋರಿ, ಜೆಸಿಐ ಅಧ್ಯಕ್ಷ ಜೆ.ಸಿ. ಪೃಥ್ವಿ ನಾಗರಾಜ್, ಕಾರ್ಯದರ್ಶಿ ಜೆಸಿ ಮಮತಾ ಕೆ, ಅಖಿಲ ಭಾರತ ವೀರಶೈವ ಮಹಾಸಭದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ನವೀನ್ ವಾರದ್, ರಮೇಶ್, ಸಂದೀಪ್, ಚಂದ್ರಶೇಖರ, ಏಕಾಂತ, ಅಭಿಷೇಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






