ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಕಿವುಡು ಮಕ್ಕಳಿಗೆ ಕೇಳುವ ಲೋಕ: ಮೆಗ್ಗಾನ್ ಆಸ್ಪತ್ರೆಯಲ್ಲಿ 25 ಕೋಕ್ಲಿಯರ್ ಇಂಪ್ಲಾಂಟ್ ಸಾಧನೆ.!? ‎

On: March 12, 2026 3:18 PM
Follow Us:
---Advertisement---

ಹುಟ್ಟು ಕಿವುಡು ಮಕ್ಕಳಿಗೆ ಆಶಾಕಿರಣ : ಉಚಿತ ಚಿಕಿತ್ಸೆಯಿಂದ ಭವಿಷ್ಯ ಬೆಳಗು – ಡಾ.ಶ್ರೀಧರ್

ಶಿವಮೊಗ್ಗ : ರಾಜ್ಯ ಸರ್ಕಾರದ ಶ್ರವಣ ಸಂಜೀವಿನಿ ಕೋಕ್ಲಿಯರ್ ಇಂಪ್ಲಾಂಟ್ ಯೋಜನೆ ಅಡಿಯಲ್ಲಿ ಗಂಭೀರ ಶ್ರವಣ ಸಮಸ್ಯೆ ಹೊಂದಿರುವ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ಹಾಗೂ ನಂತರದ ಪುನರ್ವಸತಿ ಸೇವೆಗಳನ್ನು ಒದಗಿಸಲಾಗುತ್ತಿದೆ. ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯಲ್ಲಿ ಈಗಾಗಲೇ 25 ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿ ನಡೆದಿವೆ ಎಂದು ಇಎನ್‌ಟಿ ವಿಭಾಗದ ಸಹ ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ್ ಎಸ್. ತಿಳಿಸಿದ್ದಾರೆ.

ಗುರುವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಟ್ಟು ಕಿವುಡು ಮಕ್ಕಳಿಗೆ ನಡೆಸುವ ಈ ಉನ್ನತ ಮಟ್ಟದ ಹಾಗೂ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು        01-03-2023 ರಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿದ್ದು, ಈಗ 25ನೇ ಶಸ್ತ್ರಚಿಕಿತ್ಸೆಯೂ ಯಶಸ್ವಿಯಾಗಿ ನೆರವೇರಿದೆ ಎಂದು ಹೇಳಿದರು. ಇದರಿಂದ ಅನೇಕ ಮಕ್ಕಳ ಜೀವನದಲ್ಲಿ ಹೊಸ ಆಶಾಕಿರಣ ಮೂಡಿದೆ ಎಂದರು.

ಈ ಯೋಜನೆಯ ಸೌಲಭ್ಯ ಬಿಪಿಎಲ್ ಮತ್ತು ಎಪಿಎಲ್ ಎಂಬ ಭೇದವಿಲ್ಲದೆ ಎಲ್ಲಾ ಅರ್ಹ ಮಕ್ಕಳಿಗೆ ಲಭ್ಯ. ಖಾಸಗಿ ಆಸ್ಪತ್ರೆಗಳಲ್ಲಿ ಇದೇ ಶಸ್ತ್ರಚಿಕಿತ್ಸೆಗೆ ಸಾಮಾನ್ಯವಾಗಿ ರೂ.12 ರಿಂದ 15 ಲಕ್ಷ ವೆಚ್ಚವಾಗುತ್ತದೆ. ಆದರೆ ಸರ್ಕಾರದ ಯೋಜನೆಯಡಿ ಇಂಪ್ಲಾಂಟ್ ಸಾಧನಕ್ಕೆ ರೂ.6 ಲಕ್ಷ ಹಾಗೂ ಶಸ್ತ್ರಚಿಕಿತ್ಸೆ ಮತ್ತು ಪುನರ್ವಸತಿಗೆ ರೂ.1.75 ಲಕ್ಷ ಸೇರಿದಂತೆ ಒಟ್ಟು ರೂ.7.75 ಲಕ್ಷ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ ಎಂದು ವಿವರಿಸಿದರು.

ಶಸ್ತ್ರಚಿಕಿತ್ಸೆ ಪಡೆದ ಎಲ್ಲಾ 25 ಮಕ್ಕಳನ್ನು ಮೈಸೂರಿನ ಎಐಐಎಸ್‌ಎಚ್ ಸಂಸ್ಥೆಗೆ ಆಡಿಟರಿ ವರ್ಬಲ್ ಥೆರಪಿಗಾಗಿ ರೆಫರ್ ಮಾಡಲಾಗಿದೆ. ಚಿಕಿತ್ಸೆ ನಂತರ ಬಹುತೇಕ ಮಕ್ಕಳಲ್ಲಿ ಕೇಳುವ ಸಾಮರ್ಥ್ಯ ಮತ್ತು ಮಾತಿನ ಕೌಶಲ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ ಎಂದರು.

ಈ ಶಸ್ತ್ರಚಿಕಿತ್ಸೆಯನ್ನು ಡಾ. ಶ್ರೀಧರ್ ಎಸ್. ಅವರು ನೆರವೇರಿಸಿದ್ದು, ಮೆಂಟರ್ ಸರ್ಜನ್ ಆಗಿ ಡಾ. ಶಂಕರ್ ಮೆಡಿಕೇರಿ ಮಾರ್ಗದರ್ಶನ ನೀಡಿದ್ದಾರೆ. ಇಎನ್‌ಟಿ ವಿಭಾಗದ ವೈದ್ಯರು, ಸಿಬ್ಬಂದಿ ಹಾಗೂ ಆಸ್ಪತ್ರೆಯ ಆಡಳಿತ ವರ್ಗದ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದರು.

ಮಕ್ಕಳಲ್ಲಿ ಗಂಭೀರ ಶ್ರವಣ ಸಮಸ್ಯೆಯನ್ನು ಬೇಗ ಗುರುತಿಸಿ, ಮೊದಲಿಗೆ ಹಿಯರಿಂಗ್ ಏಡ್ಸ್ ಮೂಲಕ ಟ್ರಯಲ್ ಥೆರಪಿ, ಅಗತ್ಯವಿದ್ದರೆ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ, ನಂತರ 2 ವರ್ಷಗಳ ಆಡಿಟರಿ ವರ್ಬಲ್ ಥೆರಪಿ ಮೂಲಕ ಪುನರ್ವಸತಿ ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಆರೋಗ್ಯ ಕೇಂದ್ರಗಳು, ಎನ್‌ಐಸಿಯು, ಎಸ್‌ಎನ್‌ಸಿಯು, ಮಕ್ಕಳ ಆಸ್ಪತ್ರೆಗಳು ಹಾಗೂ ಸಮುದಾಯ ಮಟ್ಟದಲ್ಲಿ ಆಶಾ, ಎಎನ್‌ಎಂ, ಆರ್‌ಬಿಎಸ್‌ಕೆ ಮತ್ತು ಎನ್‌ಪಿಪಿಸಿಡಿ ತಂಡಗಳು ಶ್ರವಣ ತಪಾಸಣೆ ನಡೆಸುತ್ತಿವೆ. ಸಮಸ್ಯೆ ಕಂಡುಬಂದ ಮಕ್ಕಳನ್ನು ಜಿಲ್ಲಾ ಕೋಕ್ಲಿಯರ್ ಇಂಪ್ಲಾಂಟ್ ಸಮಿತಿಗೆ ರೆಫರ್ ಮಾಡಲಾಗುತ್ತದೆ ಎಂದು ವಿವರಿಸಿದರು.

ಡಾ. ಶಂಕರ್ ಮೆಡಿಕೇರಿ ಮಾತನಾಡಿ, ಮೊದಲು 1 ರಿಂದ 6 ವರ್ಷದ ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿತ್ತು, ಆದರೆ ಈಗ 2 ವರ್ಷದೊಳಗಿನ ಮಕ್ಕಳಿಗೂ ಶಸ್ತ್ರಚಿಕಿತ್ಸೆ ಸಾಧ್ಯವಾಗಿದೆ. ಇದು ಮಕ್ಕಳ ಭವಿಷ್ಯಕ್ಕೆ ಅತ್ಯುತ್ತಮ ಚಿಕಿತ್ಸೆ ಎಂದು ಹೇಳಿದರು.

ಈ ವೇಳೆ ಈಗಾಗಲೇ 1020ಕ್ಕೂ ಹೆಚ್ಚು ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಿರುವ ಡಾ. ಶಂಕರ್ ಮೆಡಿಕೇರಿ ಅವರನ್ನು ಸನ್ಮಾನಿಸಲಾಯಿತು. ಶಸ್ತ್ರಚಿಕಿತ್ಸೆ ಪಡೆದ ಐಶಾನಿ ಎಸ್. ಭಟ್ ಅವರ ತಾಯಿ ತಮ್ಮ ಮಗಳ ಚಿಕಿತ್ಸೆಯ ಅನುಭವವನ್ನು ಹಂಚಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸರ್ಜನ್ ಡಾ. ಗೀತಾ ಸುಶೀಲ್ ಕುಮಾರ್, ಇಎನ್‌ಟಿ ವಿಭಾಗದ ಡಾ. ಚಂಪಾ ಹಾಗೂ ಶುಶ್ರೂಷಕಾಧೀಕ್ಷಕಿ ಶೇಷಮ್ಮ ಉಪಸ್ಥಿತರಿದ್ದರು.

Sathish munchemane

Join WhatsApp

Join Now

 

Read More