ರಿಂಗ್ ರಸ್ತೆ, 1000 ಫ್ಲಾಟ್‌ಗಳು, ಎರಡು ಮಾಲ್‌ಗಳ ನಿರ್ಮಾಣಕ್ಕೆ ಚಾಲನೆ
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ) ವತಿಯಿಂದ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ವಾಜಪೇಯಿ ಬಡಾವಣೆಯಿಂದ ಗೆಜ್ಜೇನಹಳ್ಳಿ-ಸೋಮಿನಕೊಪ್ಪ ರಸ್ತೆಗೆ ಸಂಪರ್ಕ ಕಲ್ಪಿಸುವ 1200 ಮೀಟರ್ ಉದ್ದದ ರಿಂಗ್ ರಸ್ತೆ ನಿರ್ಮಾಣ ಕಾಮಗಾರಿಗೆ ಗುರುವಾರ ಚಾಲನೆ ನೀಡಲಾಯಿತು.
ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ 60 ಮೀಟರ್ ಅಗಲದ ಮಹಾಯೋಜನೆಯ ಹೊರ ವರ್ತುಲ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಸುಮಾರು ₹5 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದ್ದು, ₹3.70 ಕೋಟಿ ಕರಾರು ಮೊತ್ತದಲ್ಲಿ ಕಾಮಗಾರಿ ಆರಂಭವಾಗುತ್ತಿದೆ ಎಂದು ತಿಳಿಸಿದರು.
ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ 34 ಕಿಲೋಮೀಟರ್ ಉದ್ದದ ರಿಂಗ್ ರಸ್ತೆ ನಿರ್ಮಾಣಕ್ಕೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದ್ದು, ಹಂತ ಹಂತವಾಗಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಾಮಾನ್ಯರಿಗಾಗಿ 1000 ಫ್ಲಾಟ್‌ಗಳ ನಿರ್ಮಾಣ
ನಗರದಲ್ಲಿ ನಿವೇಶನ ಮತ್ತು ಜಾಗಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರಿಗೆ ಮನೆ ನಿರ್ಮಾಣ ಕಷ್ಟಕರವಾಗುತ್ತಿರುವ ಹಿನ್ನೆಲೆಯಲ್ಲಿ ಊರಗಡೂರಿನ 4 ಎಕರೆ ಪ್ರದೇಶದಲ್ಲಿ 1, 2 ಹಾಗೂ 3 ಬಿಎಚ್‌ಕೆ ಮಾದರಿಯ ಸುಮಾರು 1000 ಫ್ಲಾಟ್‌ಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಯೋಜನೆ ಆಡಳಿತಾತ್ಮಕ ಅನುಮೋದನೆ ಹಂತದಲ್ಲಿದ್ದು, 15 ರಿಂದ 20 ದಿನಗಳಲ್ಲಿ ಅನುಮೋದನೆ ದೊರೆತ ಬಳಿಕ ಕಾಮಗಾರಿ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಜೆ.ಎಚ್. ಪಟೇಲ್ ಬಡಾವಣೆಯಲ್ಲೂ ಆಧುನಿಕ ಸೌಲಭ್ಯಗಳಾದ ಸ್ವಿಮ್ಮಿಂಗ್ ಪೂಲ್, ಕ್ಲಬ್ ಹೌಸ್, ಪಾರ್ಕ್ ಹಾಗೂ ಸಭಾಂಗಣ ಒಳಗೊಂಡ ಅಪಾರ್ಟ್‌ಮೆಂಟ್ ನಿರ್ಮಾಣ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಎರಡು ಮಾಲ್‌ಗಳ ನಿರ್ಮಾಣಕ್ಕೆ ಯೋಜನೆ
ಸಾರ್ವಜನಿಕರ ಅನುಕೂಲಕ್ಕಾಗಿ ಗೋಪಾಲಗೌಡ ಬಡಾವಣೆಯ ವಿವೇಕಾನಂದ ಬಡಾವಣೆಯಲ್ಲಿ ಹಾಗೂ ಸೋಮಿನಕೊಪ್ಪ 200 ಅಡಿ ರಸ್ತೆಯಲ್ಲಿ ತಲಾ ಒಂದು ಮಾಲ್ ನಿರ್ಮಿಸುವ ಉದ್ದೇಶವಿದೆ. ಜೊತೆಗೆ ವಾಜಪೇಯಿ ಲೇಔಟ್‌ನಲ್ಲಿ ಸೂಡಾದ ನೂತನ ಕಚೇರಿ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
100 ಪಾರ್ಕ್ ಅಭಿವೃದ್ಧಿಗೆ ಒತ್ತು
ನಗರವನ್ನು ಸುಂದರಗೊಳಿಸುವ ಹಾಗೂ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ 100 ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ 50 ಪಾರ್ಕ್‌ಗಳಲ್ಲಿ ವಾಕಿಂಗ್ ಪಾಥ್, ಲೈಟಿಂಗ್ ವ್ಯವಸ್ಥೆ ಹಾಗೂ ಹಸಿರು ಪರಿಸರ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಸುಂದರೇಶ್ ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಸೂಡಾ ವತಿಯಿಂದ ಕಡಿಮೆ ದರದಲ್ಲಿ ನಿವೇಶನ ಹಂಚಿಕೆ, ಕೆರೆ ಹಾಗೂ ಪಾರ್ಕ್ ಅಭಿವೃದ್ಧಿ ಸೇರಿದಂತೆ ವಿವಿಧ ಜನಪರ ಯೋಜನೆಗಳು ಜಾರಿಯಾಗುತ್ತಿವೆ. ನಗರಾಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ನಗರದಲ್ಲಿ 12 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಮಂಜೂರಾಗಿದ್ದು, ಕಾಮಗಾರಿ ಶೀಘ್ರಗತಿಯಲ್ಲಿ ನಡೆಯಬೇಕಿದೆ. ಫುಟ್‌ಬಾಲ್ ಕ್ರೀಡಾಂಗಣ ಮಂಜೂರಾತಿ ಕುರಿತಂತೆ ಕ್ರೀಡಾ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೂಡಾ ಸದಸ್ಯ ಪ್ರವೀಣ್, ಆಯುಕ್ತ ಬಿ.ಆರ್. ಮಂಜುನಾಥ್, ಎಇ ಗಂಗಾಧರ್, ಎಇಇ ಬಸವರಾಜಪ್ಪ, ಟಿಪಿಎಂ ಅಭಿಲಾಷ್ ಸೇರಿದಂತೆ ಸ್ಥಳೀಯ ನಿವಾಸಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.





