ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

On: May 21, 2026 8:25 AM
Follow Us:
---Advertisement---

ಮುಷ್ಕರ ನಡುವೆಯೂ ತೆರೆದಿದ್ದ ಮೆಡಿಕಲ್‌ ಅಂಗಡಿ; ಮನವರಿಕೆಯಿಂದ ಬಂದ್‌.!?

ಆನ್‌ಲೈನ್‌ ಔಷಧ ಮಾರಾಟ ವಿರೋಧಿಸಿ ಶಿವಮೊಗ್ಗದಲ್ಲಿ ಸಾಂಕೇತಿಕ ಮುಷ್ಕರ.

ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಕರೆಯ ಮೇರೆಗೆ ಇಂದು (ಮೇ 20, 2026) ಶಿವಮೊಗ್ಗ ಜಿಲ್ಲೆಯ ಬಹುತೇಕ ಮೆಡಿಕಲ್‌ ಅಂಗಡಿಗಳು ಸಾಂಕೇತಿಕ ಮುಷ್ಕರದ ಅಂಗವಾಗಿ ಬಂದ್‌ ಆಗಿದ್ದವು. ದೀರ್ಘಕಾಲದಿಂದ ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಅಕ್ರಮ ಔಷಧ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆಸಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಈ ವೇಳೆ ದುರ್ಗಿಗುಡಿ ಮುಖ್ಯರಸ್ತೆಯಲ್ಲಿರುವ ಒಂದು ಮೆಡಿಕಲ್‌ ಅಂಗಡಿ ತೆರೆಯಲಾಗಿದ್ದು, ಔಷಧ ವಿತರಣೆ ನಡೆಯುತ್ತಿತ್ತು. ವಿಷಯ ತಿಳಿದ ಸಂಘದ ಸದಸ್ಯರು ಸ್ಥಳಕ್ಕೆ ತೆರಳಿ ಅಂಗಡಿ ಮಾಲೀಕರಿಗೆ ಮುಷ್ಕರದ ಉದ್ದೇಶವನ್ನು ಮನವರಿಕೆ ಮಾಡಿಕೊಟ್ಟರು. ನಂತರ ಅಂಗಡಿ ಮಾಲೀಕರು ಸಹಕಾರ ಸೂಚಿಸಿ ತಕ್ಷಣವೇ ಅಂಗಡಿಯನ್ನು ಬಂದ್‌ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಸದಸ್ಯರು, ಅಖಿಲ ಭಾರತೀಯ ಔಷಧ ವ್ಯಾಪಾರಿಗಳ ಸಂಘ (AIOCD) ಹಾಗೂ ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಕರೆಯಂತೆ ಶಿವಮೊಗ್ಗ ಜಿಲ್ಲೆಯ ಎಲ್ಲಾ ಔಷಧ ವ್ಯಾಪಾರಿಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದರು.

ಅಕ್ರಮ ಮತ್ತು ಅನಿಯಂತ್ರಿತ ಆನ್‌ಲೈನ್‌ ಔಷಧ ಮಾರಾಟ, ನಕಲಿ ಇ-ಪ್ರಿಸ್ಕ್ರಿಪ್ಷನ್‌ಗಳ ಬಳಕೆ, ವೈದ್ಯಕೀಯ ಸಲಹೆ ಇಲ್ಲದೆ ಮನೆ ಬಾಗಿಲಿಗೆ ಔಷಧ ವಿತರಣೆ ಹಾಗೂ ಅತಿಯಾದ ರಿಯಾಯಿತಿ ನೀಡುವ ಪದ್ಧತಿಗಳು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ 1940 ಹಾಗೂ ನಿಯಮಗಳು 1945ರ ಅಡಿಯಲ್ಲಿ ಆನ್‌ಲೈನ್‌ ಔಷಧ ಮಾರಾಟಕ್ಕೆ ಸ್ಪಷ್ಟ ಅವಕಾಶವಿಲ್ಲದಿದ್ದರೂ, ಹಲವು ಆನ್‌ಲೈನ್‌ ಕಂಪನಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಪರವಾನಗಿ ಪಡೆದ ಔಷಧ ವ್ಯಾಪಾರಿಗಳ ಜೀವನೋಪಾಯಕ್ಕೂ ದೊಡ್ಡ ಹೊಡೆತ ಬಿದ್ದಿದೆ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತುರ್ತು ಮಧ್ಯಸ್ಥಿಕೆ ವಹಿಸಿ ಅಕ್ರಮ ಆನ್‌ಲೈನ್‌ ಔಷಧ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಸಂಘದವರು ತಿಳಿಸಿದರು.

Sathish munchemane

Join WhatsApp

Join Now

 

Read More

Leave a Comment