ಶಿವಮೊಗ್ಗ ನಗರದ 33ನೇ ವಾರ್ಡ್‌ನ ಹಳೆಯ ಮಂಡಲಿ ದುರ್ಗಾ ಪರಮೇಶ್ವರಿ ದೇವಾಲಯದ ಹಿಂಭಾಗದಲ್ಲಿರುವ ನಿವಾಸದಲ್ಲಿ ಇಂದು ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ. ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ರಾಮಸ್ವಾಮಿ ಅವರ ಮನೆಯಲ್ಲಿ ಈ ದುರಂತ ಸಂಭವಿಸಿದೆ.
ಅವಘಡ ಸಂಭವಿಸಿದ ಸಮಯದಲ್ಲಿ ಮನೆಯಲ್ಲಿಯಾರೂ ಇರದ ಕಾರಣ, ಬೆಂಕಿ ವೇಗವಾಗಿ ಹಬ್ಬಿ ಮನೆಯಲ್ಲಿದ್ದ ಗೃಹ ಬಳಕೆಯ ಎಲ್ಲಾ ವಸ್ತುಗಳು ಸಂಪೂರ್ಣ ಸುಟ್ಟುಹೋಗಿವೆ. ಘಟನೆಯ ಬಗ್ಗೆ ತಿಳಿದುಕೊಂಡ ಅಕ್ಕಪಕ್ಕದ ನಿವಾಸಿಗಳು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಬೆಂಕಿ ಇತರ ಮನೆಗಳಿಗೆ ಹರಡುವ ಸಾಧ್ಯತೆ ಇದ್ದುದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಘಟನೆ ಸ್ಥಳಕ್ಕೆ ನಗರ ಶಾಸಕ ಚನ್ನಬಸಪ್ಪ ಭೇಟಿ ನೀಡಿ, ರಾಮಸ್ವಾಮಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಗುತ್ತಿಗೆ ಆಧಾರದಲ್ಲಿ ಜೀವನ ಸಾಗಿಸುತ್ತಿರುವ ರಾಮಸ್ವಾಮಿ ಅವರಿಗೆ ಈ ಅವಘಡದಿಂದ ಭಾರೀ ಆರ್ಥಿಕ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ಇನ್ನೂ ಸ್ಥಳ ಪರಿಶೀಲನೆಗಾಗಿ ಕೆ.ಪಿ.ಟಿ.ಸಿ.ಎಲ್. ಅಧಿಕಾರಿಗಳು ಆಗಮಿಸದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ಹಾನಿಗೊಳಗಾದ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.








