ತೃಪ್ತಿ ಹೆಲ್ತ್ ಕೇರ್ ವತಿಯಿಂದ ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಸಂಸದ ಬಿ.ವೈ. ರಾಘವೇಂದ್ರ ಅವರು ಉದ್ಘಾಟಿಸಿದರು.
ಶಿಬಿರದಲ್ಲಿ ಸಿ-ಆರ್ಮ್ ಫ್ಲೋರೋಸ್ಕೋಪ್, ಕಿಡ್ನಿ ಸ್ಟೋನ್ ಸ್ಕ್ಯಾನಿಂಗ್, ಮಧುಮೇಹ ಪರೀಕ್ಷೆ, ಇಸಿಜಿ ಸೇರಿದಂತೆ ವಿವಿಧ ಪರೀಕ್ಷೆಗಳು ಉಚಿತವಾಗಿ ನಡೆಸಲಾಯಿತು. ಕಾರ್ಮಿಕರು ಮತ್ತು ಅವರ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ಅವರು, ತೃಪ್ತಿ ಹೆಲ್ತ್ ಕೇರ್ ವತಿಯಿಂದ ಪ್ರತಿ ಗುರುವಾರ ಕಟ್ಟಡ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಿಗೆ ಕೇವಲ ₹300 ದರದಲ್ಲಿ ಆರೋಗ್ಯ ತಪಾಸಣೆ ನಡೆಸುತ್ತಿರುವ ಡಾ. ಎಸ್. ಚಂದ್ರಶೇಖರ್ (ಮೂತ್ರಶಾಸ್ತ್ರಜ್ಞ ಮತ್ತು ಆಂಡ್ರೋಲಜಿಸ್ಟ್) ಅವರ ಸೇವೆಯನ್ನು ಪ್ರಶಂಸಿಸಿದರು.
ಆರೋಗ್ಯ ಮತ್ತು ಶಿಕ್ಷಣವು ಪವಿತ್ರವಾದ ಕಾರ್ಯಗಳಾಗಿದ್ದು, ಸಮಾಜಕ್ಕೆ ಉಪಯೋಗವಾಗುವ ಕೆಲಸಗಳಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು. ದೇಶದ ಕಾರ್ಮಿಕ ವರ್ಗವು ಆರ್ಥಿಕ ವ್ಯವಸ್ಥೆಯ ಬೆನ್ನುಎಲುಬಾಗಿದ್ದು, ಅವರಿಗೆ ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳು ಜಾರಿಯಲ್ಲಿವೆ ಎಂದು ತಿಳಿಸಿದರು.
ಇ-ಶ್ರಮ ಪೋರ್ಟಲ್‌ನಲ್ಲಿ ಈಗಾಗಲೇ 30 ಕೋಟಿಗೂ ಹೆಚ್ಚು ಜನರು ನೋಂದಣಿ ಮಾಡಿಕೊಂಡಿರುವುದು ಹೆಮ್ಮೆಯ ವಿಷಯ ಎಂದರು. ಮುದ್ರಾ ಯೋಜನೆಯ ಮೂಲಕ ಗ್ಯಾರೆಂಟಿ ಇಲ್ಲದೆ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಕಾರ್ಮಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಟ್ಟಡ ಕಾರ್ಮಿಕರು ತಿಂಗಳಿಗೆ ₹50 ರಿಂದ ₹200ರವರೆಗೆ ಬ್ಯಾಂಕ್ ಗೆ ಕಟ್ಟಿದರೆ 60 ವರ್ಷ ನಂತರ ₹4000 ಪಿಂಚಣಿ ಪಡೆಯುವ ಯೋಜನೆ ಜಾರಿಯಲ್ಲಿದೆ. ಜೊತೆಗೆ ಭವಿಷ್ಯದಲ್ಲಿ ಕಿಡ್ನಿ, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿತ ರೋಗಗಳಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆಗಳನ್ನೂ ಕೇಂದ್ರ ಸರ್ಕಾರ ರೂಪಿಸುತ್ತಿದೆ ಎಂದು ಹೇಳಿದರು.
ಶಿವಮೊಗ್ಗದ ರಕ್ಷಣಾ ಕಾಲೇಜಿನಲ್ಲಿ ಪ್ಲಂಬರ್, ಎಲೆಕ್ಟ್ರಿಷಿಯನ್ ಮತ್ತು ಸೆಕ್ಯೂರಿಟಿ ಗಾರ್ಡ್ ತರಬೇತಿ ಕೋರ್ಸ್‌ಗಳನ್ನು ಕಡಿಮೆ ಶುಲ್ಕದಲ್ಲಿ ನೀಡಲಾಗುತ್ತಿದ್ದು, ಕಾರ್ಮಿಕರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಜಪಾನ್ ದೇಶದೊಂದಿಗೆ ಒಡಂಬಡಿಕೆಯಡಿ ಯುವತಿಯರಿಗೆ ನರ್ಸಿಂಗ್ ಉದ್ಯೋಗ ಹಾಗೂ ಚಾಲಕರಿಗೆ ಹೆಚ್ಚಿನ ಸಂಬಳದ ಉದ್ಯೋಗಾವಕಾಶಗಳೂ ಲಭ್ಯವಾಗುತ್ತಿವೆ ಎಂದು ತಿಳಿಸಿದರು.
ದೇಶದ ಭದ್ರತೆ ಬಗ್ಗೆ ಮಾತನಾಡಿದ ಅವರು, ಸೈನಿಕರ ಸಾಹಸ ಮತ್ತು ಪ್ರಧಾನಮಂತ್ರಿಯ ಗಟ್ಟಿತನದಿಂದ ದೇಶದ ಜನರಿಗೆ ಯಾವುದೇ ಭಯವಿಲ್ಲ ಎಂದು ಹೇಳಿದರು.







