ಶಿವಮೊಗ್ಗ ನಗರದ ಬೊಮ್ಮನ್ ಕಟ್ಟೆ ಪ್ರದೇಶದ ಏ-ಬ್ಲಾಕ್‌ನಲ್ಲಿರುವ ಆಶ್ರಯ ಮನೆಯಲ್ಲಿ 12 ವರ್ಷದ ಬಾಲಕಿ ಜೀವಿತ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ದುರ್ಘಟನೆ ನಡೆದಿದೆ.
ಮೃತ ಬಾಲಕಿ ಜೀವಿತ, ಬೊಮ್ಮನ್ ಕಟ್ಟೆಯ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಇತ್ತೀಚೆಗೆ ಪರೀಕ್ಷೆ ಮುಗಿದು ರಜೆ ಇದ್ದ ಹಿನ್ನೆಲೆಯಲ್ಲಿ ಮನೆಯಲ್ಲಿ ಇದ್ದಾಗಲೇ ಈ ಘಟನೆ ಸಂಭವಿಸಿರುವುದು ಅಚ್ಚರಿ ಮೂಡಿಸಿದೆ.
ಸ್ಥಳೀಯರ ಪ್ರಕಾರ, ಈ ಭಾಗದಲ್ಲಿ ಇತ್ತೀಚೆಗೆ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಹದಗೆಡುತ್ತಿದೆ ಎಂದು ಆರೋಪಿಸಿದ್ದು, ಹೆಚ್ಚಿನ ಪೊಲೀಸ್ ಬೀಟ್ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಇನ್ನೂ ಸಣ್ಣ ವಯಸ್ಸಿನ ಮಕ್ಕಳಲ್ಲಿಯೇ ಇಂತಹ ಘಟನೆ ಸಂಭವಿಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಈ ಸಾವಿನ ಕುರಿತು ಹಲವಾರು ಅನುಮಾನಗಳು ವ್ಯಕ್ತವಾಗುತ್ತಿವೆ. ಸಂಪೂರ್ಣ ತನಿಖೆಯಿಂದಲೇ ಘಟನೆಯ ನಿಜಾಂಶ ಬಹಿರಂಗವಾಗಬೇಕಿದೆ ಎಂದು ಜನರು ಆಗ್ರಹಿಸಿದ್ದಾರೆ.
ಮೃತ ಬಾಲಕಿಯ ತಾಯಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.






