ಭದ್ರಾವತಿ ತಾಲ್ಲೂಕಿನ ದಾನವಾಡಿ ಗ್ರಾಮದ ಶಿವಕುಮಾರ (34) ಅವರು ಬುಧವಾರ (04/03/2026) ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಶಿವಕುಮಾರ ಅವರು ಎಂದಿನಂತೆ ಬೆಳಗ್ಗೆ 9.00 ಗಂಟೆಗೆ ಮನೆಯಿಂದ ಕೆಲಸದ ನಿಮಿತ್ತ ಹೊರಟಿದ್ದರು. ಸವಳಂಗ ಹತ್ತಿರದ ಕೋಳಿ ಫಾರಂನಲ್ಲಿ ಕೋಳಿಮರಿಗಳಿಗೆ ಇಂಜೆಕ್ಷನ್ ನೀಡಲು ತಮ್ಮ ಟಿವಿಎಸ್ ಸ್ಟಾರ್ ಸಿಟಿ ಬೈಕ್ (ನಂ: KA-14-ET-1774) ನಲ್ಲಿ ಶಿವಮೊಗ್ಗ ಕಡೆಯಿಂದ ಹಿಟ್ಟೂರು ಕಡೆ ಪ್ರಯಾಣಿಸುತ್ತಿದ್ದರು.
ಬೆಳಗ್ಗೆ ಸುಮಾರು 11.20 ಗಂಟೆ ಸುಮಾರಿಗೆ ತ್ಯಾಜವಳ್ಳಿ ಕೆರೆಯ ನಂತರದ ತಿರುವಿನಲ್ಲಿ, ಹಿಟ್ಟೂರು ಕಡೆಯಿಂದ ಬಂದ ಲಾರಿ (ನಂ: KA-14-C-6731) ಚಾಲಕ ಮಹೇಶ್ ನಾಯ್ಕ್ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಶಿವಕುಮಾರ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಬಗ್ಗೆ ನೀಡಿದ ದೂರಿನ ಮೇರೆಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಲಾರಿ ಚಾಲಕ ಮಹೇಶ್ ನಾಯ್ಕ್ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತ ವಲಯವಾಗಿರುವ ತ್ಯಾಜವಳ್ಳಿ ತಿರುವು.!
ತ್ಯಾಜವಳ್ಳಿ ಹಳ್ಳದ ಸಮೀಪದ ಈ ತಿರುವಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಪದೇ ಪದೇ ಅಪಘಾತಗಳು ಸಂಭವಿಸಿ ಈಗಾಗಲೇ ಮೂರು ಜೀವಗಳು ಬಲಿಯಾಗಿವೆ. ಆದರೂ ಜಿಲ್ಲಾಡಳಿತ ಹಾಗೂ ಪಿಡಬ್ಲ್ಯೂಡಿ ಇಲಾಖೆ ಈ ಪ್ರದೇಶವನ್ನು ‘ಅಪಘಾತ ವಲಯ’ ಎಂದು ಘೋಷಿಸಿ ಎಚ್ಚರಿಕೆ ನಾಮಫಲಕ ಅಳವಡಿಸಿಲ್ಲ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯ ಪಂಚಾಯತ್ ಅಧಿಕಾರಿಗಳು ಮತ್ತು ಸಂಬಂಧಿತ ಇಲಾಖೆ ಇದೀಗವಾದರೂ ಗಮನ ಹರಿಸಿ, ಅಪಘಾತ ವಲಯ ಎಂದು ಸೂಚಿಸುವ ಫಲಕ ಅಳವಡಿಸಿ, ಅಗತ್ಯ ಸುರಕ್ಷತಾ ಕ್ರಮ ಕೈಗೊಂಡು ಮುಂದಿನ ಅನಾಹುತಗಳನ್ನು ತಡೆಗಟ್ಟಬೇಕೆಂಬುದು ಸಾರ್ವಜನಿಕರ ಹಾಗೂ ಪತ್ರಿಕೆಯ ಆಶಯವಾಗಿದೆ.






