ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ(ರಿ) ಶಿವಮೊಗ್ಗ ವತಿಯಿಂದ ಧರ್ಮ ಸಭೆ ಯಶಸ್ವಿಯಾಗಿ ನೆರವೇರಿಕೆ
ಶಿವಮೊಗ್ಗ, ಜುಲೈ 12 –
ಮಲೆನಾಡು ವೀರಶೈವ ಲಿಂಗಾಯತ ಮಠಾಧೀಶರ ಪರಿಷತ್ ವತಿಯಿಂದ, ಇಂದು ಶನಿವಾರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ(ರಿ), ಶಿವಮೊಗ್ಗ ಆಯೋಜಿಸಿದ್ದ ಧರ್ಮಸಭೆ ವಿಜೃಂಭಣೆಯಿಂದ ನಡೆಯಿತು. ಶಿವಮೊಗ್ಗದ ಸವಳಂಗ ರಸ್ತೆಯ ಕುವೆಂಪುನಗರದಲ್ಲಿರುವ ವೀರಶೈವ ಲಿಂಗಾಯತ ಸಭಾಭವನದಲ್ಲಿ ನಡೆದ ಈ ಧರ್ಮಸಭೆಯಲ್ಲಿ ಸಾವಿರಾರು ಭಕ್ತರು, ಸಮಾಜದ ಹಿರಿಯರು ಹಾಗೂ ಗಣ್ಯರು ಭಾಗವಹಿಸಿ ಧರ್ಮದ ಬಗೆಗಿನ ಚಿಂತನೆಯಲ್ಲಿ ತೊಡಗಿದ್ದರು.
ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದ ಬೆಕ್ಕಿನಕಲ್ ಮಠಾಧೀಶರಾದ ಶ್ರೀ ಶ್ರೀ ಶ್ರೀ ಡಾ. ಮಲ್ಲಿಕಾರ್ಜುನ ಮುರಘರಾಜೇಂದ್ರ ಸ್ವಾಮಿಗಳು, ಸಮಾಜದ ಮುಂದಿನ ಪೀಳಿಗೆಗೆ ದಾರಿ ತೋರಿದಂತ ಮಹತ್ವದ ಸಂದೇಶ ನೀಡಿದರು. “ಈ ಸಭಾಭವನ ನಿರ್ಮಾಣದ ಹಿಂದೆ ಜಿಲ್ಲೆಯ ಅಧ್ಯಕ್ಷ ರುದ್ರಮುನಿ ಸಜ್ಜನ ಅವರ ಶ್ರಮ ಹಾಗೂ ನಿಷ್ಠೆ ಇದೆ. ಇಂತಹ ಆಧುನಿಕ ಸೌಕರ್ಯಗಳಿರುವ ಭವನವನ್ನು ನಿರ್ಮಿಸಲು ಅವರು ಸಾಕಷ್ಟು ಕಷ್ಟಪಟ್ಟು, ಸಮರ್ಥ ನಾಯಕತ್ವ ವಹಿಸಿದ್ದಾರೆ” ಎಂದು ಸ್ವಾಮೀಜಿ ಶ್ಲಾಘಿಸಿದರು.
ಅವರು ತಮ್ಮ ಮಾತಿನಲ್ಲಿ, ಇತ್ತೀಚಿನ ದಿನಗಳಲ್ಲಿ ಸಮಾಜದವರು ದಾನ ಧರ್ಮದಿಂದ ಹಿಂದೇಟು ಹಾಕುತ್ತಿರುವ ಪ್ರವೃತ್ತಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು. “ಹಿಂದಿನ ಕಾಲದಲ್ಲಿ ಮಠಗಳಿಗೆ ಸಮಾಜದ ಎಲ್ಲಾ ವರ್ಗದವರು ದಾನ ನೀಡಿ, ಶಿಕ್ಷಣ, ವಸತಿ, ಆರೋಗ್ಯ ಸೇವೆಗಳನ್ನು ಬೆಂಬಲಿಸುತ್ತಿದ್ದರು. ಆದರೆ ಇವತ್ತು ಆ ಹಿತಚಿಂತನೆ ಕಡಿಮೆಯಾಗಿದೆ. ಇನ್ನೂ ಅನೇಕ ಮಠಗಳು ಶಿಕ್ಷಣ ಹಾಗೂ ಸಮಾಜಮುಖಿ ಸೇವೆಗಳನ್ನು ನೀಡುತ್ತಿರುವರೂ ಸಹ ಹಣಕಾಸಿನ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿವೆ. ಸಮುದಾಯದ ಜನರು ಮತ್ತೆ ದಾನ ಧರ್ಮದ ಪರಂಪರೆಯನ್ನು ಜೀವಂತವನ್ನಾಗಿಸಬೇಕು” ಎಂದು ಅವರು ಕರೆ ನೀಡಿದರು.
ಈ ಧರ್ಮಸಭೆಯ ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಗಮಿಸಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಾತನಾಡುತ್ತಾ, “ಸಮಾಜದ ಏಕತೆ, ಧರ್ಮಪ್ರಜ್ಞೆ ಮತ್ತು ಮೌಲ್ಯಾಧಾರಿತ ಜೀವನ ಶೈಲಿಗೆ ವೀರಶೈವ ಲಿಂಗಾಯತ ಮಠಗಳು ಹೆಮ್ಮೆಯ ಕಂಬಗಳಾಗಿವೆ. ಇಂತಹ ಸಭೆಗಳು ಧರ್ಮಬೋಧನೆಗೆ, ಸಮಾಜದ ಅಭ್ಯುದಯಕ್ಕೆ ನಿಜವಾದ ವೇದಿಕೆಯಾಗುತ್ತವೆ” ಎಂದರು.
ಕಾರ್ಯಕ್ರಮದ ವೇಳೆ, ಸಭಾಭವನ ನಿರ್ಮಾಣದ ಕಾರ್ಯಕ್ಕೆ ದೇಣಿಗೆ ನೀಡಿದವರನ್ನು ಜಿಲ್ಲೆಯ ಅಧ್ಯಕ್ಷ ರುದ್ರಮುನಿ ಸಜ್ಜನ ಅವರು ಸ್ಮರಿಸಿ, ಸಭೆಯಲ್ಲಿ ಸ್ವಾಮಿಜಿಗಳಿಂದ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹಲವರು ಉಪಸ್ಥಿತರಿದ್ದು, ಸಂಸ್ಥೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಧರ್ಮಸಭೆಯ ಮತ್ತೊಂದು ಪ್ರಮುಖ ತೀರ್ಮಾನವೆಂದರೆ – ಶಿವಮೊಗ್ಗದ ಬಿ.ಎಚ್. ರಸ್ತೆಯ ಸಹ್ಯಾದ್ರಿ ಕಾಲೇಜು ಬಳಿಯ ವೃತ್ತಕ್ಕೆ ‘ಕೆಳದಿ ರಾಣಿ ಚನ್ನಮ್ಮ ವೃತ್ತ’ ಎಂಬ ಹೆಸರಿಡಬೇಕೆಂಬ ನಿರ್ಣಯ. ಈ ನಿರ್ಣಯವನ್ನು ಧರ್ಮಸಭೆಯಲ್ಲಿ ಸ್ವೀಕರಿಸಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಖಾಂತರ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸುವ ನಿರ್ಧಾರ ಕೈಗೊಂಡಿತು. ಸ್ಥಳೀಯ ಇತಿಹಾಸ ಮತ್ತು ಮಹಿಳಾ ಸಾಮರ್ಥ್ಯಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ಹೆಸರಿನ ಆಯ್ಕೆ ಶ್ಲಾಘನೀಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಕಾರ್ಯಕ್ರಮದ ಕೊನೆಯಲ್ಲಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ(ರಿ) ಇದರ ಸಂಘಟನಾ ಶಕ್ತಿ, ಶಿಸ್ತುವಂತಿಕೆ ಮತ್ತು ಸಮರ್ಪಣೆಯ ಬಗ್ಗೆ ಸ್ವಾಮೀಜಿಗಳುಮೆಚ್ಚುಗೆವ್ಯಕ್ತಪಡಿಸಿದರು. “ಚಿಕ್ಕದಾದರೂ ಈ ಧರ್ಮಸಭೆ ಅತ್ಯಂತ ಅಚ್ಚುಕಟ್ಟಾಗಿ, ಶ್ರದ್ಧಾಭಕ್ತಿಯಿಂದ ಸಾಗಿದ್ದು, ಸಮಾಜದ ಉಳಿದ ಅಂಗಸಂಸ್ಥೆಗಳಿಗೂ ಆದರ್ಶವಾಗಬಹುದು” ಎಂದರು.
ಒಟ್ಟಾರೆ, ಧರ್ಮಸಭೆ ಧರ್ಮದ ಬಗೆಗಿನ ಜಾಗೃತಿ ಹೆಚ್ಚಿಸಲು, ಮಠಗಳ ಸೇವಾ ಚಟುವಟಿಕೆಗಳ ಕುರಿತು ಜನರ ಗಮನ ಸೆಳೆಯಲು ಹಾಗೂ ಸಮಾಜವನ್ನು ಮತ್ತೆ ಧರ್ಮದ ಚೌಕಟ್ಟಿಗೆ ತರಲು ಒತ್ತಾಯಿಸಿದ ಮಹತ್ವದ ವೇದಿಕೆಯಾಗಿ ಹೊರಹೊಮ್ಮಿತು. ಮುಂದಿನ ದಿನಗಳಲ್ಲಿ ಇಂತಹ ಸಭೆಗಳು ಹೆಚ್ಚಾಗಿ ನಡೆಯಲಿ ಎಂಬ ಆಶಯ ಎಲ್ಲರಲ್ಲಿಯೂ ವ್ಯಕ್ತವಾಯಿತು.