ಶಿವಮೊಗ್ಗ ನಗರದಲ್ಲಿ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದ ಅನೇಕ ಯುವಕರು ಹಾಗೂ ಮಧ್ಯಮ ವಯಸ್ಕರಿಗೆ ಇತ್ತೀಚಿನ ದಿನಗಳಲ್ಲಿ ಆಹಾರ ಮತ್ತು ದಿನಸಿ ವಿತರಣೆ ಸಂಸ್ಥೆಗಳಾದ Blinkit ಆಶಾಕಿರಣವಾಗಿದೆ
ದಿನಪೂರ್ತಿ ದುಡಿದು ಕನಿಷ್ಠ ಆದಾಯ ಗಳಿಸಲು ಈ ಕೆಲಸ ಹಲವರಿಗೆ ಜೀವನಾಧಾರವಾಗಿದೆ. ಅದರಲ್ಲೂ ಬ್ಲಿಂಕಿಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಡೆಲಿವರಿ ಉದ್ಯೋಗಿಗಳು ಬೆಳಗ್ಗೆಯಿಂದ ರಾತ್ರಿ ತನಕ ದುಡಿದು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.
ಆದರೆ ಇದೀಗ ಶಿವಮೊಗ್ಗದಲ್ಲಿ ಬ್ಲಿಂಕಿಟ್ ಕಚೇರಿ ಎದುರಿನ ಪಾರ್ಕಿಂಗ್ ಸಮಸ್ಯೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕೆಲವು ದಿನಗಳ ಹಿಂದೆ ಸಂಚಾರಿ ಪೊಲೀಸ್ ಅಧಿಕಾರಿಗಳು ಕಚೇರಿ ಎದುರು ದ್ವಿಚಕ್ರ ವಾಹನಗಳ ಅಸ್ತವ್ಯಸ್ತ ಪಾರ್ಕಿಂಗ್ ಕುರಿತು ಕಂಪನಿ ನಿರ್ವಹಣೆಯ ಗಮನಕ್ಕೆ ತಂದಿದ್ದು, ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದರು. ಇದಕ್ಕೆ ಸ್ಪಂದಿಸಿದ್ದ ಕಂಪನಿ, ಕಚೇರಿಯನ್ನು ಬೇರೆ ರಸ್ತೆಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭಿಸಿದ್ದು, ಹೊಸ ಕಚೇರಿಯ ಕಾಮಗಾರಿ ನಡೆಯುತ್ತಿದೆ. ಇನ್ನೂ ಸುಮಾರು ಮೂರು ತಿಂಗಳೊಳಗೆ ಸ್ಥಳಾಂತರ ಪೂರ್ಣಗೊಳ್ಳಲಿದೆ ಎಂದು ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.
ಆದರೆ ಈ ನಡುವೆ ದುರ್ಗಿಗುಡಿ ಭಾಗದಲ್ಲಿ ನಿನ್ನೆ ಸಂಜೆ ಸಂಚಾರಿ ಪೊಲೀಸರು ಬ್ಲಿಂಕಿಟ್ ಉದ್ಯೋಗಿಗಳ ದ್ವಿಚಕ್ರ ವಾಹನಗಳಿಗೆ ದಂಡ ವಿಧಿಸಿರುವುದು ಉದ್ಯೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಾನೂನು ದೃಷ್ಟಿಯಿಂದ ಪೊಲೀಸರು ಕೈಗೊಂಡ ಕ್ರಮ ಸರಿಯೇ ಆಗಿದ್ದರೂ, ಆ ಉದ್ಯೋಗಿಗಳ ನೈಜ ಪರಿಸ್ಥಿತಿ ಕೇಳಿದರೆ ಯಾರಿಗಾದರೂ ಮರುಕ ಹುಟ್ಟುವುದು ಸಹಜ.
ಒಬ್ಬ ಉದ್ಯೋಗಿ ತೋರಿಸಿದ ಟ್ರಿಪ್ ಶೀಟ್ ಪ್ರಕಾರ, ಅವರು ಬೆಳಗ್ಗೆ 5.30ಕ್ಕೆ ಲಾಗಿನ್ ಆಗಿ ಸಂಜೆ 7 ಗಂಟೆಯವರೆಗೆ ದುಡಿದು ಪಡೆದ ಮೊತ್ತ ಕೇವಲ 600 ರೂಪಾಯಿ. ಆದರೆ ಸಂಚಾರಿ ಪೊಲೀಸರು ವಿಧಿಸಿದ ದಂಡವೇ 500 ರೂಪಾಯಿ. “ಸಾರ್, ಇಂದು ನಾನು ದುಡಿದ ಸಂಪೂರ್ಣ ಹಣವನ್ನೇ ಪೊಲೀಸರಿಗೆ ಕಟ್ಟಿದ್ದೇನೆ. ಮುಂದೆ ಬ್ಲಿಂಕಿಟ್ ವಾಹನ ಎಲ್ಲೇ ಕಂಡರೂ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದ್ದಾರೆ” ಎಂದು ಉದ್ಯೋಗಿ ಅಳಲು ತೋಡಿಕೊಂಡಿದ್ದಾರೆ.
“ಶಿವಮೊಗ್ಗದಲ್ಲೇ ಈಗಾಗಲೇ ಉದ್ಯೋಗದ ಕೊರತೆ ಇದೆ. ಜೀವನ ಕಟ್ಟಿಕೊಳ್ಳಲು ಏನೋ ಒಂದು ದಾರಿ ಸಿಕ್ಕಿತೆಂದು ಈ ಕೆಲಸಕ್ಕೆ ಬಂದಿದ್ದೇವೆ. ಈಗ ಅದನ್ನೂ ಕಠಿಣ ಕ್ರಮಗಳಿಂದ ಕಷ್ಟಕರ ಮಾಡುತ್ತಿದ್ದಾರೆ” ಎಂಬುದು ಹಲವರ ಬೇಸರ.
ಉದ್ಯೋಗಿಗಳು ಈ ಕುರಿತು ಕಂಪನಿ ನಿರ್ವಹಣೆಯ ಗಮನಕ್ಕೂ ತಂದಿದ್ದಾರೆ. ಆದರೆ “ಪೊಲೀಸರು ಹಾಕಿದ ದಂಡವನ್ನು ನೀವುಗಳೇ ಪಾವತಿಸಬೇಕು. ಕೆಲಸ ಮಾಡಬೇಕೆಂದರೆ ನಿಯಮ ಪಾಲಿಸಬೇಕು, ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ” ಎಂಬ ಉತ್ತರ ಸಿಕ್ಕಿದೆ ಎಂದು ಆರೋಪಿಸಿದ್ದಾರೆ. ಇದರಿಂದ ಬೇಸತ್ತ ಕೆಲ ಉದ್ಯೋಗಿಗಳು ಒಟ್ಟಾಗಿ ಡೆಲಿವರಿ ಸೇವೆ ಸ್ಥಗಿತಗೊಳಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ.
ಸಂಚಾರಿ ನಿಯಮ ಪಾಲನೆ ಅಗತ್ಯವೇ ಸರಿ. ಆದರೆ ಕಂಪನಿಯು ಈಗಾಗಲೇ ಕಚೇರಿ ಸ್ಥಳಾಂತರಕ್ಕೆ ಒಪ್ಪಿಕೊಂಡಿರುವ ಸಂದರ್ಭದಲ್ಲಿ, ಇನ್ನೂ ಮೂರು ತಿಂಗಳ ಅವಧಿ ಕೇಳಿರುವಾಗ ಉದ್ಯೋಗಿಗಳ ವಾಹನಗಳನ್ನು ದಂಡಿಸಿ, ಕೆಲವು ವಾಹನಗಳನ್ನು ಠಾಣೆಗೆ ಕೊಂಡೊಯ್ಯುವುದು ಎಷ್ಟು ಮಾನವೀಯ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಶಿವಮೊಗ್ಗ ನಗರದಲ್ಲಿರುವ ಅನೇಕ ವಾಣಿಜ್ಯ ಸಂಕೀರ್ಣಗಳು, ಆಸ್ಪತ್ರೆಗಳು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೆಪ ಮಾತ್ರ ಕ್ಕೆ ಗ್ರೌಂಡ್ ಫ್ಲೋರ್ ಆದರೆ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು ಹೊಸ ವಿಷಯವೇನಲ್ಲ. ಆದರೂ ಅವರ ಮೆಲೆ ಕಠಿಣ ಕ್ರಮವಿಲ್ಲ ಹೀಗಿರುವಾಗ ಕೇವಲ ಬಡ ಡೆಲಿವರಿ ಉದ್ಯೋಗಿಗಳ ಮೇಲಷ್ಟೇ ಕಠಿಣ ಕ್ರಮ ಕೈಗೊಳ್ಳುವುದು ಸಮಂಜಸವೇ ಎಂಬ ಪ್ರಶ್ನೆ ಉದ್ಭವಿಸಿದೆ.
ಸಂಚಾರಿ ನಿಯಮ ಜಾರಿಯ ಜೊತೆ ಮಾನವೀಯತೆಗೂ ಸ್ಥಾನ ಸಿಗಬೇಕು. ಬದುಕಿಗಾಗಿ ದಿನವಿಡೀ ರಸ್ತೆ ಮೇಲೆ ದುಡಿಯುವ ಯುವಕರ ನೋವನ್ನು ಅರ್ಥಮಾಡಿಕೊಳ್ಳುವ ಮನೋಭಾವವೂ ಅಗತ್ಯ. ಇದೇ “ಸಾತ್ವಿಕ ನುಡಿ” ಪತ್ರಿಕೆಯ ಆಶಯ.






