ಶಿವಮೊಗ್ಗದ ವೆಜ್ ಮತ್ತು ನಾನ್ ವೆಜ್ ಫುಡ್ ಕೋರ್ಟ್ ವ್ಯಾಪಾರಿಗಳಿಗೆ ಮಹಾನಗರ ಪಾಲಿಕೆ ಹಲವು ಬಾರಿ ಎಚ್ಚರಿಕೆ ನೀಡಿದರೂ, ಸ್ವಚ್ಛತೆಗೆ ಯಾವುದೇ ಪ್ರಾಮುಖ್ಯತೆ ನೀಡದೆ ನಿರ್ಲಕ್ಷ್ಯ ತೋರಿರುವುದು ಕೊನೆಗೂ ದಂಡಬಿತ್ತು.
ಸಸ್ಯಹಾರಿ, ಮತ್ತು ಮಾಂಸಹಾರಿ ಕೋರ್ಟ್ ಆವರಣದಲ್ಲಿ ವ್ಯಾಪಾರಸ್ಥರು ಉತ್ತಮ ಗುಣಮಟ್ಟದ ಆಹಾರ, ಶುದ್ಧ ಕುಡಿಯುವ ನೀರು ಹಾಗೂ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಬಾರದೆಂದು ಮಹಾನಗರ ಪಾಲಿಕೆಯಿಂದ ಅನೇಕ ಸಲ ತಿಳುವಳಿಕೆ ನೀಡಲಾಗಿತ್ತು. ಆದರೆ ವ್ಯಾಪಾರಸ್ಥರು ಅಲ್ಲಿ ಅಸಹಕಾರ ತೋರಿದ ಹಿನ್ನೆಲೆಯಲ್ಲಿ ಪಾಲಿಕೆ ಹೆಲ್ತ್ ಇನ್ಸ್ಪೆಕ್ಟರ್ ವಸಂತ ರವರು ಶನಿವಾರ ಆವರಣಕ್ಕೆ ಬೇಟಿ ನೀಡಿ ತಪಾಸಣೆ ನಡೆಸಿದರು. ಪರಿಶೀಲನೆಯ ವೇಳೆ ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿರುವುದು ಹಾಗೂ ಅಗತ್ಯ ಸ್ವಚ್ಛತೆ ಕಾಪಾಡದಿರುವುದು ದೃಢಪಟ್ಟ ಹಿನ್ನೆಲೆ ಹಲವು ಅಂಗಡಿಗಳಿಗೆ ತಕ್ಷಣವೇ ದಂಡ ವಿಧಿಸಲಾಯಿತು.
ನಗರದ ಜನರಿಗೆ ದಿನನಿತ್ಯ ಬಳಸುವ ಆಹಾರದ ಗುಣಮಟ್ಟ ಮತ್ತು ಆರೋಗ್ಯ ಕಾಪಾಡುವ ದೃಷ್ಟಿಯಿಂದ ಪಾಲಿಕೆ ಈ ಕ್ರಮ ಕೈಗೊಂಡಿದ್ದು, ಇದು ಬಹುಮಂದಿ ಸಾರ್ವಜನಿಕರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಫುಡ್ ಕೋರ್ಟ್ ಪ್ರದೇಶದಲ್ಲಿ ಅನೇಕ ಬಾರಿ ಅಸಮರ್ಪಕ ಸ್ವಚ್ಛತೆ ಹಾಗೂ ಅಸಮಾಧಾನಕಾರಿ ಪರಿಸ್ಥಿತಿ ಕಂಡುಬಂದಿದ್ದರೂ, ಈ ಬಾರಿ ನೇರ ಕ್ರಮ ಕೈಗೊಳ್ಳುವುದರಿಂದ ವ್ಯಾಪಾರಸ್ಥರಿಗೆ ಬಿಗಿ ಎಚ್ಚರಿಕೆಯಾಗಿದೆ.
ನಗರದ ನಾಗರಿಕರು ಪಾಲಿಕೆ ಅಧಿಕಾರಿಗಳ ತಕ್ಷಣದ ಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮುಂದೆಯೂ ಇಂತಹ ನಿಷೇಧಿತ ವಸ್ತುಗಳ ಬಳಕೆ ಹಾಗೂ ಸ್ವಚ್ಛತೆಗೆ ನಿರ್ಲಕ್ಷ್ಯ ಮಾಡಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.