ಶಿವಮೊಗ್ಗ : ಮಹಾನಗರ ಪಾಲಿಕೆಯ ಆಶ್ರಯ ವಿಭಾಗದ ಸಮುದಾಯ ಸಂಘಟನಾ ಅಧಿಕಾರಿ ಶಶಿಧರ್ ಎ.ಪಿ., ಲಂಚ ಸ್ವೀಕರಿಸುವ ಸಮಯದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮಜೀದ್ ಟೈಲ್ಸ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯ ನಿವಾಸಿ ಮಹ್ಮದ್ ಆಸೀಪ್ ಉಲ್ಲಾ ಅವರು, ಅಮ್ಯಾದ್ ಅಲಿ ಎಂಬವರಿಂದ ಮನೆ ಖರೀದಿಸಿದ್ದರು. ಖರೀದಿಸಿದ ಮನೆಯನ್ನು ತಮ್ಮ ಹೆಸರಿಗೆ ಖಾತೆ ಮಾಡಲು ಮಹಾನಗರ ಪಾಲಿಕೆಯಲ್ಲಿ ಅರ್ಜಿ ಸಲ್ಲಿಸುವ ಸಲುವಾಗಿ ಆಶ್ರಯ ವಿಭಾಗದ ಅಧಿಕಾರಿ ಶಶಿಧರ್ ಅವರನ್ನು ಸಂಪರ್ಕಿಸಿದ್ದರು. ಈ ಸಂದರ್ಭದಲ್ಲಿ ಶಶಿಧರ್ ಅವರು ದಾಖಲೆ ಪರಿಶೀಲನೆ ಮತ್ತು ಸ್ಥಳ ಮಹಜರ ನಡೆಸುವುದಾಗಿ ಹೇಳಿ, ಮನೆ ಖಾತೆ ಮಾಡಿಕೊಡುವ ಶರತ್ತಿಗೆ 10,000 ರೂ. ಲಂಚ ಬೇಡಿಕೊಂಡಿದ್ದಾರೆ.
ಲಂಚ ನೀಡಲು ಒಪ್ಪದ ಆಸೀಪ್ ಉಲ್ಲಾ ಅವರು ಈ ಸಂಬಂಧ ಧ್ವನಿಮುದ್ರಣ ಮಾಡಿ, ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದರು. ದೂರು ಸ್ವೀಕರಿಸಿದ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ 2018) ರ ಕಲಂ 7(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ ವಿರುದ್ಧ ಆಗಸ್ಟ್ 29, 2025ರಂದು ಸಂಜೆ 4.15ರ ಸುಮಾರಿಗೆ ಶಿವಮೊಗ್ಗ ನಗರದ ನೆಹರು ರಸ್ತೆ, ನೇತಾಜಿ ಸುಭಾಷಚಂದ್ರ ಭೋಸ್ ವಾಣಿಜ್ಯ ಸಂಕೀರ್ಣದ ಮೂರನೇ ಮಹಡಿಯ ಆಶ್ರಯ ಕಚೇರಿಯಲ್ಲಿ, ಶಶಿಧರ್ ಅವರು ದೂರುದಾರರಿಂದ 10,000 ರೂ. ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ತಂಡ ದಾಳಿ ನಡೆಸಿ ಅವರನ್ನು ಬಲೆಗೆ ಬೀಳಿಸಿದರು. ಈ ವೇಳೆ ಲಂಚದ ಹಣವನ್ನು ಜಪ್ತಿ ಪಡಿಸಲಾಗಿದೆ.
ಅಪಾದಿತ ಅಧಿಕಾರಿಯಾದ 57 ವರ್ಷದ ಶಶಿಧರ್ ಎ.ಪಿ. (ಪರಮೇಶ್ವರಪ್ಪ ಎನ್.ರವರ ಪುತ್ರ), ಸಮುದಾಯ ಸಂಘಟನಾ ಅಧಿಕಾರಿ, ಆಶ್ರಯ ಕಛೇರಿ, ಮಹಾನಗರ ಪಾಲಿಕೆ, ಶಿವಮೊಗ್ಗ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.